ಮಣ್ಣಿನ ಮೇಲೊಂದು ಮರವಾಗಿ..


ಕುಹು ಕುಹೂ..ಗಾಢ ನಿದ್ದೆಯಲ್ಲಿದ್ದೆ. ಆಗ  ಕೇಳಿಸಿತು ಈ ಕೂಗು. ನಾನು ಕಣ್ಣುಜ್ಜಿಕೊಂಡೆ. ಕಾಂಕ್ರೀಟ್ ಕಾಡಿನಲ್ಲಿ ಕೋಗಿಲೆ ಬಂದು ಕೂಗುವುದುಂಟೇ..?? ಒಳ್ಳೆಯ ಕನಸೇ ಬಿದ್ದಿದೆ ಎಂದು ಮಗ್ಗುಲಾದೆ. ಅರೆ! ಮತ್ತೆ ಕುಹು ಕುಹೂ.. ಏನಾದರಾಗಲಿ ನೋಡೇಬಿಡುವ ಎಂದು ಮೆಲ್ಲಗೆ ಕಿಟಕಿಯ ಪರದೆ ಸರಿಸಿದರೆ ಆ ಹಸಿರು ಎಲೆಗಳ ಮಧ್ಯೆ ಕಾಣಿಸೇಬಿಟ್ಟಿತು ಆ ಕೋಗಿಲೆ.

ಸಂಜೆ ಆಫೀಸಿನಿಂದ ಬಂದು ‘ಉಸ್ಸಪ್ಪಾ’ ಎಂದು ಮನೆ ಬಾಗಿಲು ಬಡಿಯಬೇಕು. ಯಾರೋ ನನ್ನನ್ನೇ ನೋಡುತ್ತಿದ್ದಾರೆ ಅನಿಸಿತು. ಯಾರಿರಬಹುದು? ಎಂದು ತಲೆ ಎತ್ತಿದರೆ ಅದೇ ಹಸಿರು ಎಲೆಗಳ ಮಧ್ಯೆ ಒಂದು ಪುಟ್ಟ ಗೂಬೆ. ಮನೆಯ ಗೇಟಿನ ಮೇಲೆ ಸರಿಯಾಗಿ ಹೆಂಗಳೆಯರ ಹಣೆಯ ಮೇಲೆ ಸರಿದಾಡುವ ಮುಂಗುರುಳಿನಂತೆ ಒಂದು ಕೊಂಬೆ ಆಡುತ್ತಿತ್ತು. ಅದೇ ಕೊಂಬೆಯಲ್ಲಿ ಈಗ ಗೂಬೆ ಮರಿ. ಅದು ನನ್ನನ್ನೂ ನಾನು ಅದನ್ನೂ ನೋಡುತ್ತಾ ಸಾಕಷ್ಟು ಹೊತ್ತಾಯಿತು. ಗೂಬೆ ಕೂಡಾ ಇಷ್ಟು ಮುದ್ದಾಗಿರುತ್ತದಾ ಎಂದು ಅದನ್ನೇ ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದೆ.

ಇನ್ನೊಮ್ಮೆ ಮಹಡಿಯ ಮೇಲೆ ಅಡ್ಡಾಡುತ್ತಿದ್ದೆ. ನೋಡಿದರೆ ಒಂದು ಉನ್ಮಾದದ ಕೂಗು. ಅದೂ ಆ ಮರದಿಂದಲೇ. ಮರದ ರೆಂಬೆ ಕೊಂಬೆಗಳ ಕಡೆ ಕಣ್ಣಾಡಿಸಿದರೆ.. ಓಹ್! ಅಲ್ಲಿ ಅಳಿಲುಗಳ ಸುರತ

ಹೆಂಚಿನಾ ಮನೆ ಕಾಣೋ, ಕಂಚಿನ ಕದ ಕಾಣೋ 
ನಿಂತಾಡೋವೆರಡು ಗಿಣಿ ಕಾಣೋ । ಅಣ್ಣಯ್ಯ 
ಅದೇ ಕಾಣೋ ನನ್ನ ತವರುಮನೆ 

ತವರನ್ನು ಬಿಟ್ಟುಕೊಡಲಾಗದೆ ಕಣ್ಣೀರು ತುಂಬಿಕೊಂಡು ಗಂಡನ ಲೋಕಕ್ಕೆ ಪ್ರವೇಶ ಪಡೆದ ಹೆಣ್ಣು ಮಕ್ಕಳಿಗೆ ಇದು ಎದೆಯೊಳಗಿನ ಹಾಡು. ತಮ್ಮ ಮನೆ ಹಾದು ಹೋಗುವವರಿಗೆಲ್ಲಾ ತಮ್ಮ ತವರ ಗುರುತು, ಅಲ್ಲಿರುವ ಮನೆಯ ಗುರುತನ್ನು ಹೇಳಿ ಅಲ್ಲಿಗೆ ಹೋಗಿ ಬನ್ನಿ ಎನ್ನುತ್ತಿದ್ದರು.

ಥೇಟ್ ಹೀಗೆಯೇ ಆಗಿ ಹೋಗಿತ್ತು. ಸರಿಸುಮಾರು ೨೫ ವರ್ಷಗಳ ಹಿಂದೆ. ಪುಟ್ಟ ಸಸಿಯೊಂದನ್ನು ಹಿಡಿದು ಬಂದಾಗ ಅವಳ ಕಣ್ಣಾಲಿಗಳು ತುಂಬಿತ್ತು. ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಲೇ ಆಕೆ ಮನೆಯ ಮುಂದೆ ಪುಟ್ಟ  ಪಾತಿ ತೋಡಿ ಅಲ್ಲಿ ಆ ಸಸಿ ನೆಟ್ಟಳು. ಆಮೇಲೆ ಗಂಡನ ಜೊತೆ ಹೊರಟುಹೋದಳು. ಅವಳು ನನ್ನ ತಂಗಿ.

ಅದು ಕಣ್ಣುಬಿಟ್ಟಿತು. ಮೊದಲು ಎರಡು ಎಲೆ, ನಂತರ ಮತ್ತೆರಡು ಹೀಗೆ ಗುಣಾಕಾರ ಮಾಡುತ್ತಾ ಮಾಡುತ್ತಲೇ, ನಾವು ನೋಡನೋಡುತ್ತಿದ್ದಂತೆಯೇ ಅದು ಹೆಮ್ಮರವಾಗಿ ಬೆಳೆದು ಹೋಯ್ತು. ಬಹುಷಃ ಈಗ ಅವಳು ಅಲ್ಲಿ ತನ್ನ ಮನೆ ಹಾದು ಹೋಗುವವರಿಗೆ ಹಾಗೇ ಹೇಳುತ್ತಿರಬಹುದು- ಒಂದು ಮಹಡಿಯ ಮನೆ, ನೆಲಕೆ ಇನ್ನೂ ಕೆಂಪು ಬಣ್ಣ, ಎಲ್ಲರಂತಹದ್ದೇ ಬಾಗಿಲು, ಮನೆಯ ಮುಂದೆ ಮಾತ್ರ ದೊಡ್ಡ ಮರ..

Read More..

Leave a Reply

Your email address will not be published. Required fields are marked *