ನನ್ನ ಪಪ್ಪ ಬಂದಿಲ್ಲ/ ಕ್ಯೂಬಾದಿಂದ ಇನ್ನೂ ವಾಪಸ್ ಬಂದಿಲ್ಲ..

ನನ್ನ ಕಾಡುವ ಗ್ವಂತನಮೋ..

ಜಿ ಎನ್ ಮೋಹನ್

 

ಪುಸ್ತಕದ ಹಾಳೆಗಳನ್ನು ಮಗುಚುತ್ತಾ ಹೋಗುತ್ತಿದ್ದ ನನ್ನ ಬೆರಳು ಗಕ್ಕನೆ ನಿಂತುಬಿಟ್ಟಿತು. ಮತ್ತೆ ಮತ್ತೆ ಓದಿದೆ.

‘ಈದ್ ಬಂದಿದೆ/ ಆದರೆ ನನ್ನ ಪಪ್ಪ ಬಂದಿಲ್ಲ/ ಕ್ಯೂಬಾದಿಂದ ಇನ್ನೂ ವಾಪಸ್ ಬಂದಿಲ್ಲ/ ನಾನು ತಿನ್ನುತ್ತಿರುವ ಈದ್ ನ ರೊಟ್ಟಿಯಲ್ಲಿ ನನ್ನ ಕಣ್ಣೀರೂ ಸೇರಿದೆ/ ನನಗೆ ಇನ್ನೇನೂ ಉಳಿದಿಲ್ಲ/ ನಾನು ಏಕೆ ನನ್ನ ತಂದೆಯ ಪ್ರೀತಿಯಿಂದ ವಂಚಿತಳಾಗಿದ್ದೇನೆ?’ -ಒಂದು ಪುಟ್ಟ ಕವಿತೆ ಒಂದು ದೊಡ್ಡ ನಿಟ್ಟುಸಿರನ್ನು ಬಿಚ್ಚಿಟ್ಟಿತ್ತು. ಕೆಲವೇ ಕೆಲವು ಸಾಲುಗಳ ಒಂದು ಪುಟ್ಟ ಕವಿತೆ ಸಾವಿರಾರು ಜನರ ದುಗುಡವನ್ನು ಹೊರಹಾಕಿತ್ತು. ಒಂದು ಪುಟ್ಟ ಕವಿತೆ ಒಂದಲ್ಲ, ಹತ್ತು ಹಲವಾರು ದೇಶಗಳ ಬಿಕ್ಕಿಗೆ ಜೊತೆಯಾಗಿತ್ತು. ಒಂದು ಪುಟ್ಟ ಕವಿತೆ ಸಂಭ್ರಮ ಎನ್ನುವುದು ಚಣ ಮಾತ್ರದಲ್ಲಿ ಹೇಗೆ ನೋವಿನ ಒರತೆಯಾಗಿಬಿಡಬಹುದು ಎನ್ನುವುದನ್ನು ಸಾರುತ್ತಿತ್ತು.

ನಾನು ಕೈನಲ್ಲಿ ಹಿಡಿದದ್ದು ‘ಮೈ ಗ್ವಂತನಮೋ ಡೈರಿ’. ಮಹ್ವಿಷ್ ರುಕ್ಸಾನಾ ಖಾನ್ ಬರೆದ ಪುಸ್ತಕ. ಬರೆದ ಪುಸ್ತಕ ಎಂದರೆ ಸರಿ ಹೋಗುವುದಿಲ್ಲವೇನೋ, ಅದು ಬರೆಸಿಕೊಂಡ ಪುಸ್ತಕ. ಎಷ್ಟೋ ದಶಕಗಳ ಹಿಂದೆ ಅಫಘಾನಿಸ್ಥಾನದ ಗಡಿಗೆ ಹೊಂದಿಕೊಂಡೇ ಇದೆಯೇನೋ ಎನ್ನುವಂತಿರುವ ಪಾಕಿಸ್ತಾನದ ಪೇಶಾವರದ ವೈದ್ಯ ಜೋಡಿಗೆ ಜನಿಸಿದಾಕೆ. ಎಲ್ಲಾ ರೀತಿಯ ಸ್ವಾತಂತ್ರ್ಯಕ್ಕೂ, ಎಲ್ಲಾ ರೀತಿಯ ಸಂಸ್ಕೃತಿಗೂ, ಎಲ್ಲಾ ರೀತಿಯ ನೋಟಕ್ಕೂ ಅವಕಾಶವಿರುವ ಅಮೆರಿಕಾವೇ ಭವಿಷ್ಯಕ್ಕೆ ಸರಿಯಾದ ಜಾಗ ಎಂದು ಅಮೆರಿಕಾವನ್ನು ಹುಡುಕಿಕೊಂಡು ಬಂದ ಜೋಡಿ ಅಲ್ಲೇ ನೆಲೆ ನಿಂತಿತು. ಇಬ್ಬರೂ ಪ್ರಖ್ಯಾತ ವೈದ್ಯರಾಗಿ ಹೆಸರು ಗಳಿಸಿದರು. ಮಕ್ಕಳಿಗೆ ಹೇಳಿದರು- ‘ಅಮೇರಿಕಾ ನೀಡುವ ಒಳ್ಳೆಯದನ್ನು ತೆಗೆದುಕೊಳ್ಳಿ. ಆದರೆ ಕೆಡುಕುಗಳನ್ನು ಒಳಗೆ ಬಿಟ್ಟುಕೊಳ್ಳಬೇಡಿ.’ ಹೇಳಿದ್ದು ಮಕ್ಕಳನ್ನು ಶಾಲೆ ಕಾಲೇಜಿಗೆ ಸೇರಿಸುವಾಗ. ಆಗ ಅವರ ಮುಂದೆ ಇದ್ದ ಭಯ ‘ತುಂಡುಡುಗೆ, ಗಾಂಜಾ ಆಫೀಮು, ಬಾಯ್ ಫ್ರೆಂಡ್ಸ್ ಡೇಟಿಂಗ್’ ಭಯ. ಆದರೆ ಈ ಹುಡುಗಿ ಮಹ್ವಿಷ್ ರುಕ್ಸಾನಾ ಖಾನ್ ಇದನ್ನು ಅಷ್ಟು ಮಾತ್ರಕ್ಕೆ ಮೀಸಲಿಡಲಿಲ್ಲ ಬದುಕಿನ ಗುರಿಯಾಗಿಯೇ ತೆಗೆದುಕೊಂಡುಬಿಟ್ಟಳು. ಆಗ ತೆರೆದುಕೊಳ್ಳುತ್ತಾ ಹೋಯಿತು ಒಂದು ವಿಚಿತ್ರ ಗಾಥೆ.

ಮಯಾಮಿ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಅಂತರ್ರಾಷ್ಟ್ರೀಯ ಕಾನೂನಿನ ಬಗ್ಗೆ ಪಾಠ ಕೇಳುತ್ತಿದ್ದ ಹುಡುಗಿಯ ಕಿವಿಗೆ ಮೊತ್ತ ಮೊದಲ ಬಾರಿಗೆ ಗ್ವಂತನಮೋ ಹೆಸರು ಬಿತ್ತು. ಅದು ಪ್ರಭುತ್ವ ಎನ್ನುವುದು ಹೇಗೆ ಕಾನೂನನ್ನು ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತದೆ ಎನ್ನುವುದನ್ನು ಕಲಿಸುತ್ತಿದ್ದ ತರಗತಿ. ಅಂತಹ ರೀತಿಯಲ್ಲಿಯೇ ಕಾನೂನನ್ನು ಬೇಕಾದಂತೆ ಬಗ್ಗಿಸಿ, ಹೇಗೆ ಕ್ಯೂಬಾದ ನೆಲದೊಳಗೆ ನುಗ್ಗಿ, ಗ್ವಂತನಮೋ ಎಂಬ ಪ್ರದೇಶದಲ್ಲಿ ಅಮೇರಿಕಾ ತನ್ನ ಮಿಲಿಟರಿ ನೆಲೆ ನಿರ್ಮಿಸಿಕೊಂಡಿದೆ, ಹೇಗೆ ಭಯೋತ್ಪಾದನೆಯ ವಿರುಧ್ಧದ ಸಮರದ ಹೆಸರಿನಲ್ಲಿ ಯಾರನ್ನು ಬೇಕಾದರೂ, ಯಾವಾಗ ಬೇಕಾದರೂ, ಯಾವುದೇ ಕಾರಣ ನೀಡದೆ ಬಂಧಿಸಿ ವರ್ಷಗಟ್ಟಲೆ ಯಾವುದೇ ಆರೋಪವನ್ನೂ ಹೊರಿಸದೆ ಚಿತ್ರಹಿಂಸೆ ನೀಡಬಹುದು ಎನ್ನುವುದನ್ನು ವಿವರಿಸುತ್ತಾ ಇತ್ತು.

ನನಗೋ ಗ್ವಂತನಮೋ ಎನ್ನುವುದು ನನ್ನ ಯೌವನಕ್ಕಿಂತ ಹೆಚ್ಚೇನೋ ಎನ್ನುವಂತಾಗಿತ್ತು. ಕ್ಯೂಬಾಗೆ ಹೋಗಿಬಂದ ನನ್ನ ತುಟಿಯ ಮೇಲೆ ಅಂದಿನಿಂದ ಇಂದಿನವರೆಗೂ ‘ಗ್ವಂತನಮೇರ, ಗ್ವಜಿರ ಗ್ವಂತನಮೇರ’ ಸೊಲ್ಲು ಆಡುವುದು ನಿಂತಿಲ್ಲ. ಗ್ವಂತನಮೇರ ಹಾಡಿಗೆ ಕಿವಿಗೊಟ್ಟ ಯಾರ ಮನಸ್ಸಿನಿಂದಾಗಲೀ, ತುಟಿಗಳ ಮೇಲಿನಿಂದಾಗಲೀ ಗ್ವಂತನಮೋ ಮರೆಯಾಗಿ ಹೋಗಲು ಸಾಧ್ಯವೇ ಇಲ್ಲ. ಕ್ಯೂಬಾದ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾಗ ಸ್ಪಾನಿಷ್ ಬಾರದ ಈ ನಾಲಿಗೆಗೆ, ಇಂಗ್ಲಿಷ್ ತಿಳಿಯದ ಆ ಕಿವಿಗಳ ನಡುವೆ ಗ್ವಂತನಮೇರ ಒಂದು ರೀತಿಯಲ್ಲಿ ವಿಸಿಟಿಂಗ್ ಕಾರ್ಡ್, ವೀಸಾ ಎಲ್ಲವೂ ಆಗಿಹೋಗಿತ್ತು. ಜಗತ್ತಿನ ನಾನಾ ದೇಶಗಳಿಂದ ಬಂದ ಸಾವಿರಾರು ಜನ ಕ್ಯೂಬಾದ ಪಾರ್ಲಿಮೆಂಟಿನ ಮೆಟ್ಟಿಲಿನ ಮೇಲೆ ನಿಂತ ಹಾಡುಗಾರರು ‘ಗ್ವಂತನಮೇರ’ ಎಂದು ದನಿ ಎತ್ತಿದ್ದೇ ಹುಚ್ಚೆದ್ದು ಆರ್ಭಟಿಸಿದ್ದು, ಕೇಕೆ ಹಾಕಿದ್ದು, ಆಕಾಶಕ್ಕೆ ತಮ್ಮ ಷರ್ಟು ಬನಿಯನ್ ಗಳನ್ನೂ ಬಿಚ್ಚೆಸೆದು ಕುಣಿದದ್ದು ನೋಡಿದ್ದ ನಾನು ಅದೇ ಗ್ವಂತನಮೋ ಬಗ್ಗೆ ಬರೆದ ಪುಸ್ತಕ ಕಂಡೊಡನೆ ಕೈಗೆತ್ತಿಕೊಂಡಿದ್ದೆ

ಆದರೆ ಮಹ್ವಿಷ್ ರುಕ್ಸಾನ ಖಾನ್ ಗೆ ಗ್ವಂತನಮೋ ನನ್ನ ರೀತಿಯ ಒಂದು ಉತ್ಸಾಹದ ಬುಗ್ಗೆಯಾಗಿ, ಯೌವ್ವನವನ್ನು ಬಡಿದೆಬ್ಬಿಸುವ ಚೇತನವಾಗಿ ಹೊಮ್ಮಿ ಬಂದಿರಲಿಲ್ಲ. ಅದು ನರಕಯಾತನೆಯಾಗಿ ಕೇಳಿ ಬಂದಿತ್ತು. ಯಾವಾಗ ತರಗತಿಯಲ್ಲಿ ಗ್ವಂತನಮೋ ಕಿವಿಗೆ ಬಿತ್ತೋ ಲ್ಯಾಪ್ ಟಾಪ್ ಕೈಗೆತ್ತಿಕೊಂಡಳು. ಗೂಗಲ್ ಮೊರೆ ಹೊಕ್ಕು ಗ್ವಂತನಮೋಗಾಗಿ ಜಾಲಾಡಿದಳು. ಯಾವುದನ್ನು ನನ್ನ ಅಮೇರಿಕಾ ಎಂದುಕೊಂಡಿದ್ದಳೋ ಆ ಅಮೇರಿಕಾ ಎನ್ನುವ ನಂಬಿಕೆ ಅಲುಗಾಡಲು ಆರಂಭಿಸಿತು. ಪೇಶಾವರದಿಂದ ಅಮೆರಿಕಾದತ್ತ ಆಕೆಯ ಕುಟುಂಬ ಮುಖ ಮಾಡಿ ನಿಂತಿದ್ದೇ ಯಾವ ದೇಶದವರೇ ಆದರೂ, ಯಾವ ಧರ್ಮದವರೇ ಆದರೂ ಎಲ್ಲರಿಗೂ ಇಲ್ಲಿ ಸಮಾನವಾಗಿ ಬದುಕುವ ಅವಕಾಶವಿದೆ. ಎಲ್ಲರಿಗೂ ಸಮಾನ ಹಕ್ಕಿದೆ ಎನ್ನುವ ಕಾರಣಕ್ಕೆ. ಯಾವಾಗ ರಸೂಲ್ ವರ್ಸಸ್ ಬುಷ್ ಪ್ರಕರಣವನ್ನು ರುಕ್ಸಾನಾ ಗೂಗಲ್ ನಲ್ಲಿ ಹುಡುಕಿತೆಗೆದಳೋ ಆಕೆಯ ಅಮೇರಿಕಾ ಬದಲಾಗಿ ಹೋಯಿತು. ಇಬ್ಬರು ಗ್ವಂತನಮೋದ ಕೈದಿಗಳು ತಮ್ಮ ವಿರುದ್ಧ ಯಾವುದೇ ಆರೋಪದ ವಿವರ ನೀಡದೆ, ವಿಚಾರಣೆಯನ್ನು ನಡೆಸದೆ, ಕನಿಷ್ಠ ವಕೀಲರ ಸಂಪರ್ಕಕ್ಕೂ ಬಿಡದೆ ವರ್ಷಾನುಗಟ್ಟಲೆ ಜೈಲಿನಲ್ಲಿ ಇಟ್ಟಿದ್ದನ್ನು ಪ್ರಶ್ನಿಸಿ ಅಮೆರಿಕಾದ ವರಿಷ್ಠ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಇದು ಅತ್ಯಂತ ಮಹತ್ವದ ತಿರುವಿಗೆ ಕಾರಣವಾಗಿ ಹೋಯಿತು.

ಕ್ಯೂಬಾದ ನೆಲವಾದ ಗ್ವಂತನಮೋವನ್ನು ಅಮೇರಿಕಾ ಕಬ್ಜಾ ಮಾಡಿಕೊಂಡು, ಕೇಳಿದವರಿಗೆ ಪನಾಮ ಕಾಲುವೆಯ ರಕ್ಷಣೆ ಮಾಡಲು ತನ್ನ ನೌಕಾ ದಳಕ್ಕೆ ಜಾಗ ಬೇಕು ಎಂದು ಸಬೂಬು ಹೇಳಿತ್ತು. ಆದರೆ ಅದಕ್ಕಿದ್ದ ಉದ್ಧೇಶ ಕ್ಯೂಬಾ ಸರ್ಕಾರವನ್ನು ಉರುಳಿಸುವುದು. ಯಾವಾಗ ಜಗತ್ತಿನ ಎಲ್ಲೆಡೆ ಪ್ರತಿಭಟನೆ ಆರಂಭವಾಯಿತೋ ಆಗ ೯೯ ವರ್ಷದ ಲೀಸ್ ನಲ್ಲಿರುತ್ತೇನೆ ಎಂದಿತು. ಹಾಗೆ ಜಬರದಸ್ತಿ ಮಾಡಿ ಗ್ವಂತನಮೋದಲ್ಲಿ ಅಮೇರಿಕ ತಳ ಊರಿದೆ.

ಇದಕ್ಕೆ ಕುಟಿಲ ತಿರುವು ಕೊಟ್ಟದ್ದು ಜಾರ್ಜ್ ಬುಷ್. ಅಮೇರಿಕಾ ನೆಲದ ಯಾವುದೇ ಕಾನೂನುಗಳಿಗೂ ಸಿಗಬಾರದು, ಈ ಜಗತ್ತಿನ ಯಾವುದೇ ಕಾನೂನೂ ತನಗೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕಾಗಿ ಅಮೆರಿಕಾದ ನೆಲದ ಆಚೆ ಕ್ಯೂಬಾದಲ್ಲಿ ಮಿಲಿಟರಿ ನೆಲೆ ಸ್ಥಾಪಿಸಿಬಿಟ್ಟರು. ಇತ್ತ ಅಮೆರಿಕಾದ ಕಾನೂನು ಈ ಕೈದಿಗಳಿಗೆ ಅನ್ವಯವಾಗುವುದಿಲ್ಲ, ಅತ್ತ ಅಂತರ್ರಾಷ್ಟ್ರೀಯವಾಗಿ ಮಾಡಿಕೊಂಡ ಜಿನೇವಾ ಒಪ್ಪಂದಗಳಿಗೂ ಮನ್ನಣೆ ಸಿಗುವಂತಿಲ್ಲ. ಅಷ್ಟು ನಾಜೂಕಾಗಿ ಈ ಗ್ವಂತನಮೋ ಮಿಲಿಟರಿ ಕೇಂದ್ರವನ್ನು ರೂಪಿಸಲಾಯಿತು. ಆಮೇಲೆ ಶುರುವಾಯಿತು ‘ಭಯೋತ್ಪಾದನೆಯ ವಿರುದ್ಧ್ಧದ ಸಮರ’.

ರುಕ್ಸಾನಾ ಭ್ರಮನಿರಸನಗೊಂಡದ್ದು ಇಲ್ಲಿಯೇ. ಯಾವಾಗ ರಸೂಲ್ ವರ್ಸಸ್ ಬುಷ್ ಪ್ರಕರಣ ಅಧ್ಯಯನ ಮಾಡಿದರೋ ಆಗಲೇ ರುಕ್ಸಾನಾ ನಿರ್ಧರಿಸಿದರು ‘ಈ ಜಗತ್ತಿನ ಎಲ್ಲೇ ಆಗಲಿ ಭಯೋತ್ಪಾದನೆಗೆ ನನ್ನ ವಿರೋಧವಿದೆ, ಆದರೆ ಅದೇ ಭಯೋತ್ಪಾದನೆಯನ್ನು ಮುಂದುಮಾಡಿ ಹಿಂಸೆ ಮಾಡುವುದಕ್ಕೂ ನನ್ನ ವಿರೋಧವಿದೆ’. ಆ ಕಾರಣಕ್ಕಾಗಿಯೇ ಆಕೆ ಗ್ವಂತನಮೋ ಕೈದಿಗಳ ಸಂಪರ್ಕ ಹೊಂದಲು ಯತ್ನಿಸುತ್ತಿದ್ದ ನ್ಯಾಯವಾದಿಗಳ ಸಂಘಟನೆಗಳ ಸಂಪರ್ಕಕ್ಕೆ ಬಂದರು. ಆ ಮೂಲಕ ಗ್ವಂತನಮೋದ ಮಿಲಿಟರಿ ಕ್ಯಾಂಪ್ ಪ್ರವೇಶಕ್ಕೆ ಸಜ್ಜಾದರು. ರುಕ್ಸಾನಾಗೆ ಪಾಶ್ತೋ ಭಾಷೆ ಗೊತ್ತಿತ್ತು. ಇದೇ ಕೈದಿಗಳಿಗೂ, ನ್ಯಾಯಾಲಯಕ್ಕೂ ಸೇತುವೆಯಾಯಿತು. ಮಿಲಿಟರಿ ಕ್ಯಾಂಪಿನಲ್ಲಿ ಇರುವವರಲ್ಲಿ ತಾಲಿಬಾನಿಗಳೂ, ಅಲ್ ಕೈದಾಗಳ ಭಯೋತ್ಪಾದಕರಿರಬಹುದು. ಅವರಿಗೆ ಖಂಡಿತಾ ಕಠಿಣ ಶಿಕ್ಷೆಯಾಗಬೇಕು. ಆದರೆ ಭಯೋತ್ಪಾದಕರಲ್ಲದವರನ್ನು ಗುರುತಿಸಲು ಅಮೇರಿಕಾ ಸರ್ಕಾರಕ್ಕೆ ವರ್ಷಗಟ್ಟಲೆ ಸಮಯ ಬೇಕೇ ಎನ್ನುವುದೇ ರುಕ್ಸಾನಾ ಪ್ರಶ್ನೆ.

ಹಾಗೆ ಆಕೆ ಪ್ರಶ್ನೆ ಕೇಳಲು ಕಾರಣಗಳಿತ್ತು. ಗ್ವಂತನಮೋದ ಮಿಲಿಟರಿ ಕ್ಯಾಂಪ್ ಪ್ರವೇಶಿಸಲು ಅನುಮತಿ ಸಿಕ್ಕ ಬಳಿಕ ಆಕೆ ಏನಿಲ್ಲೆಂದರೂ ೩೦ಕ್ಕೂ ಬಾರಿ ಅಲ್ಲಿಗೆ ಭೇಟಿ ನೀಡಿದರು. ಅಲ್ಲಿ ಆಕೆ ಕಂಡದ್ದು ಕಣ್ಣೀರ ಕಥೆಗಳನ್ನು. ತಾಲಿಬಾನ್ ಸರ್ಕಾರ ಉರುಳಿದ ನಂತರ ತನ್ನ ತಾಯ್ನಾಡನ್ನು ನೋಡಲು ೧೩ ವರ್ಷಗಳ ನಂತರ ತವರಿಗೆ ಬಂಡ ವೈದ್ಯ, ಪತ್ರಕರ್ತ, ಕವಿ ಸಹೋದರರು, ಔಷಧಿ ವ್ಯಾಪಾರಿ, ಶಾಲಾ ಅಧ್ಯಾಪಕ ಹೀಗೆ ಅನೇಕರು ಬಂಧಿಸಲ್ಪಟ್ಟಿದ್ದರು. ಅದಕ್ಕೆ ಕ್ಯಾಸಿಯೊ ವಾಚ್ ಕಟ್ಟಿದ್ದ ಎನ್ನುವುದು ಒಂದು ಕಾರಣವಾದರೆ, ಕ್ಲಿಂಟನ್-ಲೆವಿನ್ಸ್ಕಿ ಪ್ರಕರಣದ ಬಗ್ಗೆ ಹಾಸ್ಯ ಲೇಖನ ಬರೆದಿದ್ದು ಇನ್ನೊಂದು, ಉದ್ದ ಗಡ್ಡವೂ ಇನ್ನೊಂದು ಕಾರಣವಾಗಿ ಹೋಗಿತ್ತು. ತನ್ನ ಸಂಸಾರದ ಮಂದಿ ಎಲ್ಲಿ ತನ್ನನ್ನು ಮರೆತುಬಿಡುತ್ತಾರೋ ಎಂದು ಕಣ್ಣೀರಿಡುತ್ತಿದ್ದವರು, ಮಕ್ಕಳ ವಿಡಿಯೋ ನೋಡಿ ಗಂಟೆಗಟ್ಟಲೆ ಬಿಕ್ಕಿ ಬಿಕ್ಕಿ ಅತ್ತವರು, ನೋವನ್ನು ಮುಚ್ಚಲೆಂದೇ ಸದಾ ಹಾಸ್ಯ ಚಟಾಕಿ ಹಾರಿಸುತ್ತಿದ್ದವರು ಹೀಗೆ..

ರುಕ್ಸಾನಾ ಹೇಳುತ್ತಾ ಹೋಗುತ್ತಾರೆ ಗ್ವಂತನಮೋ ಮಿಲಿಟರಿ ಕ್ಯಾಂಪಿನಲ್ಲಿ ಇವರಾರಿಗೂ ಹೆಸರಿಲ್ಲ ಇವರು ಬರೀ ಸಂಖ್ಯೆಗಳು ಕೈದಿ ನಂಬರ್ ಗಳು. ಏಕೆಂದರೆ ನಂಬರ್ ಗಳಿಗೆ ಜೀವ ಇರುವುದಿಲ್ಲ, ಹೆಸರುಗಳಿಗಿರುತ್ತವೆ. ಏಕೆಂದರೆ ಹೆಸರುಗಳಿಗೆ ಒಂದು ವಿಳಾಸ, ಸಂಸಾರ, ಗುರುತುಗಳಿರುತ್ತದೆ. ನಂಬರ್ ಗಳಿಗಿಲ್ಲ. ಹೆಸರುಗಳು ಎಂದರೆ ಜೀವಗಳು, ನಂಬರ್ ಗಳು ಎಂದರೆ ವಸ್ತುಗಳು. ಇದೆಲ್ಲಾ ಓದಿ ಮುಗಿಸುವಾಗಲೇ ಫೇಸ್ ಬುಕ್ ನಲ್ಲಿ ಕವಿ ರಾಜೇಂದ್ರ ಪ್ರಸಾದ್ ಬರೆದ ಕವಿತೆಯ ಸಾಲು ಕಾಣಿಸಿತು- ‘ಕವಿಯನ್ನೂ ಕವಿತೆಯನ್ನೂ ನೀವು ನಿಷೇದ ಮಾಡಬಲ್ಲಿರಷ್ಟೇ/ ಹೂ ಘಮಿಸುವ ಹಾದಿಯಲ್ಲಿ ಚೆಕ್ ಪೋಸ್ಟ್ ಗಳಿಡಲಾಗದು..’

Leave a Reply

Your email address will not be published. Required fields are marked *